Articles

‘ಮಕ್ಕಳನ್ನು ಅಡಾಪ್ಟ್ ಮಾಡಿಕೊಂಡು ಓದಿನ ಖರ್ಚನ್ನು ವಹಿಸಿಕೊಳ್ಳುತ್ತೇನೆ’ ಎಂದ ವಿದ್ಯಾರ್ಥಿನಿ

- ಚೇತನ್ ಸಿ ರಾಯನಹಳ್ಳಿ

‘ತಾಯಿಮನೆ’ ಗೆಳೆಯ ಸುದರ್ಶನ್ ಮತ್ತು ಅವರ ಸ್ನೇಹಿತರುಗಳು ಸೇರಿ ನಡೆಸುತ್ತಿರುವುದು. ಇದರ ಆರಂಭ ಹೇಗಾಯಿತು? ಎಂದಾಗ ‘ಒಮ್ಮೆ ನಾವು ಬಸ್‌ಗಾಗಿ ಕಾಯುತ್ತಿದ್ದಾಗ ಬಂದ ಹುಡುಗ ಏನನ್ನಾದರೂ ಕೊಡಿ ಎಂದು ಕೇಳಿದ, ನಮಗೆ ಕೊಡುವುದಕ್ಕಿಂತ ಆತ ಇದನ್ನೇ ವೃತ್ತಿ ಮಾಡಿಕೊಂಡರೆ ಎಂದುಕೊoಡು, ಓದುತ್ತೀಯಾ? ನಾವು ಓದಿಸುತ್ತೇವೆ ಎಂದೆವು. ಒಪ್ಪಿಕೊಂಡ ಎಲ್ಲರೂ ಒಂದಿಷ್ಟು ಕೈಲಾದ ಹಣವನ್ನು ಹಾಕಿ ಓದಿಸಲು ಮುಂದಾದೆವು. ಇದರ ಜೊತೆಗೆ ಇತರರು ನೀಡಿದ ಸಹಾಯದಿಂದ ಅಂದಿನಿoದ ಇಂದಿನವರೆಗೂ ಸಾಗುತ್ತಲೇ ಬರುತ್ತಿದೆ’ ಎಂಬ ಮಾತುಗಳು ನಮಗೂ ಸಹಾಯ ಮಾಡಲು ಪ್ರೇರಣೆಯಾದವು.
ಈ ಎಲ್ಲಾ ವಿಚಾರಗಳನ್ನು ಸ್ಕೌಟ್‌ನ ಹಿರಿಯರುಗಳಿಗೆ, ಮುಖ್ಯೋಪಾಧ್ಯಾಯರಿಗೆ ತಿಳಿಸಿದೆವು. ಅವರುಗಳು ಒಮ್ಮೆ ಭೇಟಿ ನೀಡಿ ಅವಲೋಕಿಸಿಕೊಂಡು ಬಂದರು. ಧಾರಾಳವಾಗಿ ನಾವು ಸಹಾಯವನ್ನು ಇವರಿಗೆ ಸಹಾಯ ಮಾಡಬಹುದೆಂದು ತಿಳಿಸಿದರು. ತಡ ಮಾಡದೆ ಶಾಲೆಯಲ್ಲಿ ‘ಸಂಕಲ್ಪo’ ತಂಡದ ಮಕ್ಕಳೊಂದಿಗೆ ಮಾತನಾಡಿದಾಗ ಎಲ್ಲರೂ ಒಪ್ಪಿದರು. ಗಣರಾಜ್ಯೋತ್ಸವದ ಸಮಯದಲ್ಲಿ ಸುದರ್ಶನ್‌ರವರನ್ನು ಅಹ್ವಾನಿಸಿದಾಗ ತಾವು ಏಕೆ ಈ ಕೆಲಸವನ್ನು ಮಾಡುತ್ತಿದ್ದೇವೆ? ಅದರ ಧ್ಯೇಯಗಳೇನು? ಯಾವ ರೀತಿಯ ಮಕ್ಕಳು ತಮ್ಮ ಜೊತೆಗಿದ್ದಾಗೆ ಎಂಬ ಮಾಹಿತಿಗಳನ್ನು ತಿಳಿಸಿದರು. ನಂತರ ‘ಸಂಕಲ್ಪo’ ಮೂಲಕ ಮಕ್ಕಳು-ಶಿಕ್ಷಕರಿಂದ ಸಂಗ್ರಹಿಸಿದ್ದನ್ನು ಮಕ್ಕಳೇ ಅವರಿಗೆ ನೀಡಿದರು. ರವೀಂದ್ರ ಸರ್ ಆ ಕ್ಷಣದಲ್ಲೇ ತಮ್ಮ ಜೇಬಿನಿಂದ ಒಂದಷ್ಟು ಹಣವನ್ನು ತೆಗೆದು ಎಣಿಸುವ ಗೋಜಿಗೆ ಹೋಗದೆ ಅದನ್ನು ಅವರಿಗೆ ನೀಡಿದರು.
ಇದಾದ ಎಷ್ಟೋ ದಿನದ ಬಳಿಕ ಒಂದಿಷ್ಟು ಪೋಷಕರು ಕಾಲ್ ಮಾಡಿ, ‘ನಾವು ಕೈಲಾದ ಒಂದಿಷ್ಟು ಸಹಾಯ ಮಾಡುತ್ತೇವೆ, ಅವರ ವಿಳಾಸ ನೀಡಿ’ ಎಂದರು. ಕೆಲವರು ಕೈಲಾದ ಹಣವನ್ನೋ, ಉಪಯುಕ್ತ ವಸ್ತುವನ್ನೋ ನೀಡಿ ‘ಇದನ್ನು ಅವರಿಗೆ ತಲುಪಿಸಿ’ ಎಂದು ಸಹ ಹೇಳಿದರು.

sri krishnadevaraya hampi


ಮಕ್ಕಳು ಕೂಡ ಎಷ್ಟು ಬದಲಾಗಿದ್ದಾರೆ ಎಂಬುದನ್ನು ನೋಡಿದೆವು. ಶಂತನು ಪೋಷಕರು ಒಂದು ದಿನದ ಸಂಪೂರ್ಣ ಊಟದ ಜವಾಬ್ದಾರಿ ನಮ್ಮದು ಎಂದರು. ರಕ್ಷ ಮತ್ತು ದೀಪು ತಮ್ಮ ಜನ್ಮದಿನಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಇಲ್ಲಿನ ಮಕ್ಕಳಿಗೆ ಪುಸ್ತಕ, ಪೆನ್ನು-ಪೆನ್ಸಿಲ್ ಇತರ ಉಪಯುಕ್ತವಾದವುಗಳನ್ನು ನೀಡಿದರು. ರಕ್ಷಿತ, ಚಂದನ್-ಚೇತನ್ ಹಣವನ್ನು ತಲುಪಿಸುವ ಕರ‍್ಯ ಮಾಡಿದರು. ಪ್ರೇಕ್ಷ, ವಚನ ಅಲ್ಲಿನ ಮಕ್ಕಳಿಗೆ ಊಟದ ವ್ಯವಸ್ಥೆಗೆ ಮುಂದಾದರು. ಅನನ್ಯ ಅವರ ತಾಯಿ ತಮ್ಮ ಸಂಘದ ವತಿಯಿಂದ ಸೋಲಾರ್‌ಅನ್ನು ನೀಡುವ ವ್ಯವಸ್ಥೆ ಮಾಡಿದರು. ಸುಧೀಂದ್ರ ಸರ್ ಅದೆಷ್ಟೋ ಸಲ ತಮಗನಿಸಿದ್ದನ್ನು ನೀಡಿದ್ದಾರೆ. ಮಂಜುಳಾ ಮೇಡಂ ಅವರ ಕುಟುಂಬದವರು ಅನೇಕ ಸಲ ಭೇಟಿ ನೀಡಿ ಕೈಲಾದ ಸಹಾಯಾಸ್ತ ನೀಡಿದ್ದಾರೆ. ಹೀಗೆ ಅದೆಷ್ಟೋ ಶಿಕ್ಷಕರು-ಮಕ್ಕಳು ತಮ್ಮ ಪೋಷಕರನ್ನು ಒಪ್ಪಿಸಿ ಕೈಲಾದ ಸಹಾಯವನ್ನು ಮಾಡುತ್ತಲೇ ಇದ್ದಾರೆ. ದೀಪಾವಳಿ ಹಬ್ಬದ ಸಮಯದಲಿ ರಿಭವ್ ತನಗೆಂದು ಕೊಡಿಸಿದ ಪಟಾಕಿಗಳನ್ನು ಈ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದ. ಪಟಾಕಿ ಸಿಡಿಸಿದ ಮಕ್ಕಳ ಮೊಗದಲ್ಲಿ ಇದ್ದ ಸಂತೋಷವೇ ನಮ್ಮಗಳಿಗೆ ತೃಪ್ತಿ ನೀಡಿತು. ಸಂಕೇತ್ ಅದೆಷ್ಟು ಸಲ, ‘ನೀವು ‘ತಾಯಿಮನೆ’ಗೆ ಹೋಗೋದಾದರೆ ತಿಳಿಸಿ ಸರ್ ನಾನು ನಿಮ್ಮ ಜೊತೆಗೆ ಬರ್ತಿನಿ’ ‘ನಾನು ತಾಯಿಮನೆಗೆ ಹೋಗಬೇಕು ಅನ್ಕೊಂಡಿದಿನಿ, ನೀವು ಬರ್ತಿರಾ?’ ಎಂದು ಕೇಳಿರುವುದು ಅದೆಷ್ಟೋ ಸಲ ಅಲ್ಲಿಗೆ ಹೋಗಿ ಅವರ ಜೊತೆಗೆ ಮುಕ್ತವಾಗಿ ಮಾತನಾಡಿ, ಅವರೆಲ್ಲರನ್ನು ನಕ್ಕು-ನಲಿಸಿ, ಸಿಹಿ ವಿತರಿಸಿ ಬಂದಿರುವ ಸಮಯವೂ ಉಂಟು.

ಒಮ್ಮೆ ದೀಪ್ತಿಯ ತಾಯಿ ಶಾಲಿನಿಯವರು ಕಾಲ್ ಮಾಡಿ, ‘ತಾಯಿಮನೆ’ಯಲ್ಲಿ 2th PUC ಓದುತ್ತಿರುವ ಹುಡುಗ Science ಅಥವಾ Art ಎಂದರು. ಏಕೆ? ಎಂದು ವಿಚಾರಿಸಲಾಗಿ, ‘ಮಗಳಿಗೆ 2th PUC ಗೈಡ್, ಪಠ್ಯಕ್ಕೆ ಸಂಬoಧಿಸಿದ ಪುಸ್ತಕಗಳನ್ನು ತೆಗೆದುಕೊಳ್ಳುತ್ತಿದ್ದು, ಈ ಹುಡುಗನ ನೆನಪಾಗಿ ಆತನಿಗೂ ಸಹ ತೆಗೆದುಕೊಳ್ಳೋಣ’ ಎಂದರು. ಕೊನೆಗೆ ತೆಗೆದುಕೊಂಡು ಈ ಹುಡುಗನಿಗೆ ನೀಡಿದರು ಸಹ.
ಅನೇಕ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗುವ, ಮಕ್ಕಳೇ ಪೋಷಕರನ್ನು ಕರೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಕೆಲವರು ‘ನೀವು ಸಹ ನಮ್ಮ ಜೊತೆಗೆ ಬನ್ನಿ’ ಎಂದಾಗ ಹೋಗಿ ಎಲ್ಲರ ಜೊತೆಗೆ ಬೆರೆತದ್ದು ಸಂತೋಷ ನೀಡಿದೆ. ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಸುದರ್ಶನ್ ಅವರ ಸೇವೆಗೆ ಕೈಲಾದ ಸಣ್ಣಪುಟ್ಟ ಸೇವೆಯನ್ನು ಮಾಡುವ ಮೂಲಕ ಮಕ್ಕಳು-ಪೋಷಕರು ಮತ್ತೊಂದು ರೀತಿಯಲ್ಲಿ ಬದುಕಿನ ಪಾಠವನ್ನು ಕಲಿಯುತ್ತಿದ್ದಾರೆ.
ತರಗತಿಯಲ್ಲಿ ಸೇವಾಮನೋಭಾವದ ಬಗ್ಗೆ ಅದೆಷ್ಟೇ ಹೇಳಿದರೂ ಎಲ್ಲರೂ ಕೇಳುತ್ತಾರೋ ಇಲ್ಲವೋ ಆದರೆ, ಕೆಲವರಂತೂ ಸೇವಾಮನೋಭಾವ ಹೊಂದಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು, ಇತರರನ್ನೂ ತೊಡಗಿಸಿಕೊಳ್ಳುವಂತೆ ಮಾಡುವುದನ್ನು ಕಂಡಿದ್ದೇವೆ. ಸಮಾಜ ನಮಗೇನು ಕೊಟ್ಟಿದ್ದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ನೀಡಿದ್ದೇವೆ ಎಂದುಕೊoಡಾಗ ಏನೇನು ಇಲ್ಲ ಎನ್ನುವ ಬದಲು ಸಾಧ್ಯವಾದ ಅಳಿಲು ಸೇವೆಯ ಮೂಲಕ ಸಮಾಜದ ಬಗೆಗಿರುವ ಕಳಕಳಿ, ಸೇವಾ ಮನೋಭಾವ ಇನ್ನೂ ನಮ್ಮಲ್ಲಿ ಉಳಿದಿದೆ. ಅದನ್ನು ಮುಂದುವರೆಸಿಕೊoಡು ಹೋಗುತ್ತೇವೆ ಎಂಬುದನ್ನು ಕೇಳಿದಾಗ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ.


ಒಮ್ಮೆ ಭಾವನ, ‘ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ, ಅದಿಲ್ಲ-ಇದಿಲ್ಲ ಅಂತ ದೂರು ಹೇಳಬೇಕಾದರೆ ಇಲ್ಲಿಯ ಮಕ್ಕಳು ನೆನಪಾಗ್ತಾರೆ, ಆಗ ಯಾವ ಕೊರತೆಗಳು ಕೊರತೆಗಳೇ ಅಲ್ಲ ಅನ್ಸತ್ತೆ, ಮತ್ತೊಮ್ಮೆ ಸಮಯ ಆದಾಗಲೆಲ್ಲ ಹೋಗಿ ಬರಬೇಕು’ ಎನ್ನುವ ಮಾತುಗಳನ್ನು ಹೇಳುತ್ತಲೇ ಇರುತ್ತಾಳೆ.
ರಕ್ಷ, ‘ಮುಂದೊoದು ದಿನ ನಾನು ಕೆಲಸಕ್ಕೆ ಹೋದಾಗ ಒಂದಿಷ್ಟು ಮಕ್ಕಳನ್ನು Adopte ಮಾಡಿಕೊಂಡು ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ’ ಎನ್ನುವುದನ್ನು ಕೇಳಿದಾಗ ಮಕ್ಕಳಿಗೆ ಕಲಿಸಿದ ಸಂಸ್ಕಾರಗಳು ಮೌಲ್ಯಗಳನ್ನು ಪಡೆದುಕೊಳ್ಳುತ್ತಿವೆ. ಮಣ್ಣಾಗುತ್ತಿಲ್ಲ ಎಂಬ ಸಮಾಧಾನದ ಸಂಗತಿಗಳು ನಮ್ಮಗಳ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಮಕ್ಕಳ ಮೂಲಕ ಸೇವೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಹೆಮ್ಮೆಯೆನಿಸುತ್ತದೆ. ಎಲ್ಲರೊಳಗೊಂದಾಗಿ ಬಾಳುವ ಈ ಮಕ್ಕಳು ಸಾರ್ಥಕ ಬದುಕಿನ ಸಾಧಕರುಗಳಾಗುವಲ್ಲಿ ಯಾವುದೇ ಅನುಮಾನವೇ ಇಲ್ಲ.

Contact us for classifieds and ads : +91 9742974234



 
error: Content is protected !!