ಅಮೃತಕ್ಕೆ ಸಮಾನವಾದ ಹಾಲು ಹಾವಿನ ಆಹಾರವಲ್ಲ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡುವ ಮೂಲಕ ಮೌಢ್ಯತೆಯಿಂದ ಹೊರಬಂದು ಆರೋಗ್ಯಕರ ಸಮಾಜವನ್ನು ಕಟ್ಟುವ ಹಬ್ಬ ನಾಗರ ಪಂಚಮಿಯಾಗಬೇಕೆಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಹೇಳಿದರು.
ಪಾಂಡವಪುರ ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಸವಫೌಂಡೇಶನ್ ಆಯೋಜಿಸಿದ್ದ ಬಸವಪಂಚಮಿ ಕಾರ್ಯಕ್ರಮದಲ್ಲಿ ಬಡಮಕ್ಕಳಿಗೆ ಹಾಲು ಹಾಗೂ ಹಣ್ಣನ್ನು ವಿತರಿಸಿ ಅವರು ಮಾತನಾಡಿದರು.
ಸಮಾನತೆಯ ಸಮಾಜ ನಿರ್ಮಾಣಕ್ಕೆ ೧೨ನೇ ಶತಮಾನದಲ್ಲೇ ಭದ್ರ ಬುನಾದಿ ಹಾಕಿದ ವಿಶ್ವಗುರು ಬಸವಣ್ಣನವರ ಲಿಂಗೈಕ್ಯಸಂಸ್ಮರಣೆಯ ದಿನವಾದ ಇಂದು ಸಂಪ್ರದಾಯವಾದಿಗಳು ಹುತ್ತಕ್ಕೆ ಹಾಲರೆದು ಸಂಭ್ರಮಿಸುವ ಪರಿಪಾಠವನ್ನು ಹಾಕಿಕೊಟ್ಟಿರುವುದು ವಿಷಾದನೀಯ. ‘ಕಲ್ಲನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ’ ಎಂಬ ವಚನದ ಮೂಲಕ ಹುತ್ತಕ್ಕೆ ಹಾಲೆರೆವ ಸಂಪ್ರದಾಯವನ್ನು ಬಸವಣ್ಣನವರು ಖಂಡಿಸಿದ್ದಾರೆ.
ವಚನಗಳ ಅಧ್ಯಯನ ಮಾಡಿದರೆ ಸಮಾನತೆಯ ಸಮಾಜ ನಿರ್ಮಾಣವಾಗುತ್ತದೆ. ಜನರು ಮಕ್ಕಳನ್ನೇ ದೇವರೆಂದು ಭಾವಿಸಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ನಾಗರ ಪಂಚಮಿ ಆಚರಿಸಬೇಕು.
ಯುವಮುಖಂಡ ಬೇಬಿ ಗಿರೀಶ್ ಮಾತನಾಡಿ, ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ಲಿಂಗೈಕ್ಯ ಸಿದ್ದಗಂಗಾಶ್ರೀಗಳು ಮಕ್ಕಳಲ್ಲೇ ದೇವರನ್ನು ಕಾಣಬೇಕೆಂಬ ಸಂದೇಶವನ್ನು ಈ ಜಗತ್ತಿಗೆ ಸಾರಿ ಹೋಗಿದ್ದಾರೆ. ಮಕ್ಕಳ ಆರೋಗ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು. ಹಾಲನ್ನು ಹಾವಿಗೆರೆಯದೆ ತಮ್ಮ ಮಕ್ಕಳಿಗೆ ನೀಡುವ ಮೂಲಕ ಮಕ್ಕಳ ಪಂಚಮಿಯನ್ನಾಗಿ ನಾಗಪಂಚಮಿಯನ್ನು ಆಚರಿಸಬೇಕೆಂದರು.
ಪರಿಸರ ಪ್ರೇಮಿ ಲವಕುಮಾರ್ ಮಾತನಾಡಿ, ನಾಗದೇವತೆ ಹೆಸರಲ್ಲಿ ನಾಗರ ಪಂಚಮಿಯೆಂದು ೧೦ ದಶಲಕ್ಷ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ದೇಶಾದ್ಯಂತ ೨೦ ಲಕ್ಷ ದಷ್ಟು ಮಕ್ಕಳು ಪೌಷ್ಠಿಕಾಂಶ ಕೊರತೆಯಿಂದ ನರಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಹಾಲನ್ನು ಕಲ್ಲುನಾಗರಕ್ಕೆ ಎರೆಯದೇ ಮಕ್ಕಳಿಗೆ ಉಣಬಡಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು ಎಂದರು.
ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬಸವ ಫೌಂಡೇಶನ್ ಅಧ್ಯಕ್ಷೆ ಹೆಚ್.ಪಿ.ಅಪರ್ಣ ಶಿವಕುಮಾರ್, ಹಸಿವಿನಿಂದ ಬಳಲುತ್ತಿರುವವರಿಗೆ ಹಾಲು ವಿತರಿಸುವ ಮೂಲಕ ನಾಗರ ಪಂಚಮಿಗೆ ವೈಚಾರಿಕ ನೆಲೆಗಟ್ಟು ಕಲ್ಪಿಸಬೇಕಿದೆ ಎಂದರು.
ದೇಶದ ಜನತೆಯಲ್ಲಿರುವ ಮೌಢ್ಯತೆಯ ಪರಿಣಾಮ ನಾಗರ ಪಂಚಮಿ ಹಬ್ಬದಂದು ೨೦ ಲಕ್ಷ ಲೀಟರಕ್ಕೂ ಹೆಚ್ಚು ಹಾಲು ಮಣ್ಣು ಪಾಲಾಗುತ್ತಿದೆ. ಹಸಿದ ಜೀವಗಳಿಗೆ ವಿತರಿಸುವ ಮೂಲಕ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದರು. ಗ್ರಾಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಬಸವಪಂಚಮಿಯಲ್ಲಿ ಪಾಲ್ಗೊಂಡಿದ್ದರು.