Latest News

ಸಾ.ರಾ. ಮಹೇಶ್ ಬುಸುಗುಟ್ಟೋದರಲ್ಲಿ ಅರ್ಥವಿಲ್ಲ : ಎಚ್. ವಿಶ್ವನಾಥ್

AskMysuru 06/09/2021

ಮೈಸೂರು: ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಸಾ.ರಾ.ಕನ್ವೆನ್ಷನ್ ಹಾಲ್ ಅನ್ನು ಶಾಸಕ ಸಾ.ರಾ.ಮಹೇಶ್ ನಿರ್ಮಾಣ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಸರ್ವೇ ಕಾರ್ಯ ನಡೆದು ಸತ್ಯಾಂಶ ಹೊರಗೆ ಬರಲಿ. ಈ ವಿಚಾರವಾಗಿ ಸಾ.ರಾ. ಮಹೇಶ್‍ ಬುಸುಗುಟ್ಟೋದರಲ್ಲಿ ಅರ್ಥವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪ್ರಾದೇಶಿಕ ಆಯುಕ್ತರು ಹೇಗೆ ಬೇಕೋ ಹಾಗೆ ಸರ್ವೇ ಬರೆದುಕೊಟ್ಟಿದ್ದಾರೆ. ಆ ಸರ್ವೇ ಕುರಿತು ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಆರ್’ಟಿಐ ಕಾರ್ಯಕರ್ತರು ಸರ್ಕಾರದ ಗಮನ ಸೆಳೆದು ಮತ್ತೆ ಸರ್ವೇಗೆ ಒತ್ತಾಯಿಸಿದಾಗ  ರಾಜ್ಯ ಸರ್ವೇ ಕಮಿಷನರ್ ಮನೀಶ್ ಮೌದ್ಗಿಲ್  ಸರ್ವೇಗೆ ಆದೇಶ ಹೊರಡಿಸಿದ್ದಾರೆ. ಸರ್ವೇ ಕಾರ್ಯ ನಡೆದ ಸತ್ಯಾಂಶ ಹೊರಗೆ ಬರಲಿ ಎಂದು ಆಗ್ರಹಿಸಿದರು.

ಒತ್ತುವರಿ ಮಾಡಿದೆ ಇದ್ದರೆ ಸಾ.ರಾ. ಮಹೇಶ್ ಅವರಿಗೆ ಭಯ ಏತಕ್ಕೆ? ಒತ್ತುವರಿ ಮಾಡದೆ ಇದ್ದಿದ್ದರೆ ಸುಮ್ಮನೆ ಯಾರೂ ಕೂಗಾಡುವುದಿಲ್ಲ. ಈ ಹಿಂದೆ ಸರ್ವೇ ಕಾರ್ಯ ಸರಿಯಾಗಿ ನಡೆದಿಲ್ಲ. ಅವರಿಗೆ ಬೇಕಾದ ಹಾಗೆ ಸರ್ವೇ ನಡೆದಿದೆ. ಹೀಗಾಗಿ ಎರಡು, ಮೂರು ಜಿಲ್ಲೆಗಳ ಸರ್ವೇ ಅಧಿಕಾರಿಗಳನ್ನು ಬಳಕೆ ಮಾಡಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದರು.

ಈ ರೀತಿ ಸರ್ವೇ ನಡೆಸಲು ರಾಜ್ಯ ಸರ್ವೇ ಕಮಿಷನರ್  ಮನೀಶ್ ಮೌದ್ಗಿಲ್ ಗೆ ಅಧಿಕಾರ ಕೊಟ್ಟವರು ಯಾರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರಶ‍್ನಿಸುತ್ತಿದ್ದಾರೆ. ಈ ಹಿಂದೆ ಸರ್ವೇ ಯಾವ ರೀತಿ ನಡೆದಿದೆ ಎಲ್ಲರಿಗೂ ಗೊತ್ತಿದೆ. ಈಗ ಸರ್ವೇ ನಡೆದು ಸತ್ಯಾಂಶ ಹೊರಗೆ ಬರಲಿ. ಒಬ್ಬ ಅಧಿಕಾರಿಗೆ ನಿನಗೇನು ಅಧಿಕಾರ ಇದೆ ಎಂದು ಪ್ರಶ್ನಿಸೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Contact us for classifieds and ads : +91 9742974234