Agriculture

ಕೋಕಂ ಬಳಕೆ ಹಲವು, ಫಲವು ನೂರಾರು…

Nagendra Sagar

cocum

ಕೋಕಂ, ಪುನರ್ಪುಳಿ, ಹುಳಿ ಮುರುಗಲು, Garcinia Indica ಮ್ಯಾಂಗೋಸ್ಟೀನ್ ಕುಟುಂಬಕ್ಕೆ ಸೇರಿದ ಒಂದು ಅತ್ಯಮೂಲ್ಯ ಕಾಡು ಹಣ್ಣಾಗಿದ್ದು ಅಮೂಲ್ಯ ಔಷಧೀಯ ಗುಣಗಳನ್ನು ಹೊಂದಿದೆ.. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದುದ್ದಕ್ಕೂ ಹೇರಳವಾಗಿ ಕಂಡು ಬರುವ ಈ ಹಣ್ಣನ್ನು ನಾವು ಸಮರ್ಪಕವಾಗಿ ಬಳಸಿ ಕೊಳ್ಳುತ್ತಿಲ್ಲ..

ನಮ್ಮಲ್ಲಿ ಸದ್ಯಕ್ಕೆ ಫಸಲು ಬರುವ ಒಂದು ಮರವಿದೆ.. ನೆಟ್ಟು ಬೆಳೆಸಿರುವ ಗಿಡಗಳಲ್ಲಿ ಇನ್ನೂ ಫಸಲು ಕಾಣಬೇಕಿದೆ.. ಈ ವರ್ಷ ಹಟ ಬಿದ್ದು ಕಪಿ ಹಿಂಡುಗಳ ಕಣ್ತಪ್ಪಿಸಿ ಹಣ್ಣು ಸಂಪಾದಿಸಿದ್ದೇವೆ.. ಹಣ್ಣನ್ನು ಸಿಗಿದು ಒಳಗಿನ ತಿರುಳನ್ನು ತೆಗೆದು ಅದರಲ್ಲಿ ಸಕ್ಕರೆ ಮತ್ತು ಚಿಟಿಕೆ ಉಪ್ಪು ತುಂಬಿಸಿ ಡ್ರೈಯರ್ರಿನಲ್ಲಿ ಇರಿಸಿದ್ದೆವು.. ನಾಲ್ಕು ದಿನಗಳ ಬಳಿಕ ಅದರ ಜ್ಯೂಸನ್ನು ಸಂಗ್ರಹಿಸಿ ಇಟ್ಟುಕೊಂಡೆವು.. ಎರಡನೇ ಬ್ಯಾಚಿಂದು ಇನ್ನು ರೆಡಿ ಆಗಬೇಕಷ್ಟೆ.. ಉಳಿದ ಸಿಪ್ಪೆಯನ್ನೂ ಅದೇ ಡ್ರೈಯರ್ರಿನಲ್ಲಿ ಒಣಗಲು ಇರಿಸಿದ್ದೇವೆ.. ಮತ್ತೆ ಕೋಕಂನ ಬೀಜ ಕೂಡ ಡ್ರೈ ಆಗುತ್ತಿದೆ..

web designing

ಈಗ ಕೋಕಂ ರಸದ ಬಗ್ಗೆ ಬರೋಣ.. ಇದಕ್ಕೆ ನಾವು ಯಾವುದೇ ಪ್ರಿಸರ್ವೇಟಿವ್ ಬಳಸಿಲ್ಲ. ಹಿಂದಿನ ಅನುಭವದ ಪ್ರಕಾರ ವರ್ಷಾವಧಿ ಇರಿಸಿದರೂ ಇದು ಹಾಳಾಗದು.. ನಿತ್ಯ ಬಳಕೆಗೆ ಅದರಲ್ಲೂ ಬೇಸಿಗೆ ಕಾಲದಲ್ಲಿ ದಾಹದ ನಿವಾರಣೆಗೆ ಉತ್ತಮ ಪೇಯ.. ಇದರ ಔಷಧೀಯ ಗುಣದ ಎದುರಿಗೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಪೆಪ್ಸಿ, ಕೋಕೋ ಕೋಲವನ್ನು ನಿವಾಳಿಸಿ ಎಸೆಯ ಬೇಕು.. ಅಕಸ್ಮಾತ್ ರಸ ಇಲ್ಲವಾದಲ್ಲಿ ಒಣಗಿಸಿದ ಸಿಪ್ಪೆಯನ್ನೇ ನೆನಸಿ ಬಳಸಬಹುದು.

ಮುರುಗಲು ಸಿಪ್ಪೆಯನ್ನು ಅಡುಗೆಯಲ್ಲಿ ಬಹುವಿಧದಲ್ಲಿ ಬಳಸ ಬಹುದು.. ಇದನ್ನೇ ಬಳಸಿ ರಸಂ ಅಥವಾ ಸಾರನ್ನು ಮಾಡಬಹುದು.. ಇದರ ಸಿಪ್ಪೆಯೊಡನೆ ಕಾಳುಮೆಣಸು ಜೀರಿಗೆ ಶುಂಠಿ, ಸೈಂಥವ ಲವಣ ಬಳಸಿ ಅತ್ಯುತ್ತಮ ಸೂಪ್ ಮಾಡ ಬಹುದು.. ಮಳೆಗಾಲದ ಥಂಡಿ ವಾತಾವರಣದಲ್ಲಂತೂ ಹಿತ ಎನ್ನಿಸುತ್ತದೆ..

ಬೀಜದಿಂದ ಕೋಕಂ ಬಟರ್ ತಯಾರಿಸ ಬಹುದು.. ಹೋಂ ಮೇಡ್ ಬ್ಲಾಕ್ ಚಾಕಲೇಟು ಮಾಡುವ ಸಂದರ್ಭದಲ್ಲಿ ಚಾಕೊಲೇಟ್ ಬಟರ್ ಬದಲು ಕೋಕಂ ಬಟರ್ ಬಳಸುವ ಪ್ರಯತ್ನ ನಡೆದಿದೆ.. ಹೀಗೆ ಬಳಸಿದರೆ ಬ್ಲಾಕ್ ಚಾಕೊಲೇಟ್ ಸಪರೇಷನ್ ಆಗುವುದಿಲ್ಲ. ವಿಶೇಷ ರುಚಿ ಕೊಡುತ್ತದೆ.. ಹೊರನೋಟದಲ್ಲೂ ವ್ಯತ್ಯಾಸ ಕಾಣುವುದಿಲ್ಲ..

ಈ ಕೋಕಂ ಬೆಣ್ಣೆಯನ್ನು ಜೇನು ಮೇಣದೊಂದಿಗೆ ಬೆರೆಸಿ ಕಾಯಿಸಿಟ್ಟುಕೊಂಡರೆ ಚಳಿದಿನಗಳಲ್ಲಿ ಅಂಗಾಲು ಒಡೆಯುವುದಕ್ಕೆ ರಾಮ ಬಾಣವಾಗುತ್ತದೆ.. ಮಾತ್ರವಲ್ಲ ಇದೇ ಕಾಂಬಿನೇಷನ್ನಿನ ಕ್ರೀಮು ಶುಷ್ಕಗೊಂಡ ಚರ್ಮಕ್ಕೆ ಉತ್ತಮ ಕಾಂತಿ ನೀಡುತ್ತದೆ.
ಕೋಕಂನ್ನು ಲಾಗಾಯ್ತಿನಿಂದಲೂ ಸಂಪ್ರದಾಯಸ್ತರ ಮನೆಯ ಅಡುಗೆಯಲ್ಲಿ, ಔಷಧ ತಯಾರಿಕಾ ಘಟಕಗಳಲ್ಲಿ ಮತ್ತು ಇಂಡಸ್ಟ್ರಿಗಳಲ್ಲೂ ಬಳಸಲಾಗುತ್ತದೆ..

ಅಗಾಧ ಔಷಥೀಯ ಗುಣಗಳಿದ್ದರೂ, ಹಿತ್ತಲಿನಲ್ಲಿಯೇ ಮರವಿದ್ದರೂ ನಾವಿದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.. ಮಲೆನಾಡಿಗೆ ಹೋಲಿಸಿದರೆ ನಮ್ಮ ಕರಾವಳಿ ಭಾಗದಲ್ಲಿ ಇದ್ದದ್ದರಲ್ಲೇ ಸ್ವಲ್ಪ ಹೆಚ್ಚಿನ ಬಳಕೆ.. ಅದೇ ಗೋವ, ಮಹರಾಷ್ಟ್ರ ಗುಜರಾತದ ಕರಾವಳಿ ಕೊಂಕಣ ಪ್ರದೇಶದಲ್ಲಿ ಯಥೇಚ್ಛವಾಗಿ ಬಳಸುತ್ತಾರೆ.. ಅಡುಗೆ ಮಾಡುವಾಗ ಹುಣಸೇ ಹುಳಿಗೆ ಬದಲಾಗಿ ಇದನ್ಪು ಬಳಸುವರು.. ಇದರ ಬಳಕೆಯಿಂದ ಖಾದ್ಯಕ್ಕೆ ವಿಶಿಷ್ಟ ಬಣ್ಣವೂ, ಸುವಾಸನೆಯೂ, ರುಚಿಯೂ ಬರುತ್ತದೆ..

ಹಾಗೆಯೇ ಔಷಧೀಯ ಗುಣಗಳ ಪಟ್ಟಿಯೂ ದೊಡ್ಡದಿದೆ.. ನಿತ್ಯ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಬಳಕೆ ಹೆಚ್ಚು ಮಾಡಿದರೆ ಸಮಸ್ಯೆ ದೂರವಾಗುತ್ತದೆ..‌ ಅಂತೆಯೇ ಅಜೀರ್ಣದ ಸಮಸ್ಯೆ ಇರುವವರು ಇದನ್ನು ಬಳಸಿ ಪ್ರಯೋಜನ ಕಾಣಬಹುದು.. ಮುಖ್ಯವಾಗಿ ಬ್ಯಾಕ್ಟೀರಿಯಾ ಸಮಸ್ಯೆಯಿಂದ ಉದರ ಶೂಲೆ ಅನುಭವಿಸುತ್ತಾ ಇರುವವರು ಕೋಕಂನ್ನು ನಿತ್ಯ ಬಳಸುವ ಅಭ್ಯಾಸ ಮಾಡಬೇಕು.. ಕರುಳ ಸಂಬಂಧೀ ಸಮಸೊಯೆ, ಅತಿಸಾರ, ಆಮಶಂಕೆ ಭೇದಿ ಆಗುತ್ತಿದ್ದರೆ ಕೋಕಂ ಬಳಸಲು ನಾಟಿ ವೈದ್ಯರು ಸೂಚಿಸುತ್ತಾರೆ.

ಕ್ಯಾನ್ಸರ್, ಹೃದಯ ಸಂಬಂಧಿ ಮತ್ತು ಲಿವರ್ರಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲಿ ಬೆಂಡಾದವರಿಗೆ ಕೋಕಂ ದಿವ್ಯೌಷಥ. ಹಾನಿಕಾರಕ ಕ್ರಿಮಿಗಳನ್ನು ನಾಶ ಮಾಡುವುದೇ ಅಲ್ಲದೇ ಉಪಯೋಗಿ ಜೀವಾಣುಗಳ ಪುನಶ್ಚೇತನದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ..

ಕೋಕಂ ಬಳಕೆಯಿಂದ ನಮ್ಮ ದೇಹದಲ್ಲಿನ ಅನಾವಶ್ಯಕವಾದ ಕೊಬ್ಬು ಕರಗುತ್ತದೆ. ಅದಲ್ಲದೇ ಮನುಷ್ಯನ ದೇಹ ಮತ್ತು ಮನಸ್ಸು ಪ್ರಫುಲ್ಲವಾಗಿರಲು ಸಾಧ್ಯವಾಗುತ್ತದೆ.

ಇದೂ ಅಲ್ಲದೇ ಇನ್ನೂ ಹಲವು ಕಾರಣಕ್ಕೆ ಮುರುಗಲು ನಮ್ಮ ದೇಹಾರೋಗ್ಯಕ್ಕೆ ಬೇಕು.. ಮತ್ತು ಭಾರತೀಯ ಔಷಧ ಪದ್ಧತಿಯಲ್ಲಿ ಬಳಕೆಯ ಪ್ರಯೋಜನದ ಪಟ್ಟಿ ಆಗಬೇಕು, ಸಂಶೋಧನೆಗಳೂ ಆಗಬೇಕು.

ಹೀಗೆ ಹಲವು ಕಾರಣಕ್ಕೆ ನಮ್ಮ ಕೃಷಿ ಭೂಮಿಯಲ್ಲಿ ಇರಬೇಕಾದ ವೃಕ್ಷವಿದು.. ಸುಲಭವಾಗಿ ಬೆಳೆಯುತ್ತದೆ.. ಹಲವು ಸುಧಾರಿತ ತಳಿಗಳೂ ಬಂದಿವೆ.. ಕೆಂಪೂ ಅಲ್ಲದೇ ಬಿಳಿ ಮುರುಗಲು ಹಣ್ಣೂ ಇದೆ.. ಜೇನಿನಿಂದಾದ ಪರಾಗಸ್ಪರ್ಶದ ಕಾರಣಕ್ಕೆ ನಮ್ಮ ಗಿಡದಲ್ಲಿ ಯಾವತ್ತಿಗೂ ಭರಪೂರ ಫಸಲು. ಇಂತಹದ್ದೊಂದು ಅಪರೂಪದ ಬಹೂಪಯೋಗಿ ಮರವೊಂದು ನಮ್ಮಲ್ಲಿದೆ ಮತ್ತು ಈ ಹಣ್ಣಿನ್ನು ಯಥೇಚ್ಛ ಬಳಸುವುದೂ ಅಲ್ಲದೇ ಮೌಲ್ಯವರ್ಧನೆ ಮಾಡಿ ವರ್ಷಪೂರ್ತಿ ಚನ್ನಾಗಿ ಬಳಸುತ್ತೇವೆ ಎನ್ನುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ.


Follow us on :
https://fb.com/askmysuru
https://instagram.com/askmysuru

Visit:
https://askmysuru.com/news

Join us on:
https://facebook.com/groups/askmysuru

Subscribe:
https://www.youtube.com/c/AskMysuru

 

rocksalt
Contact us for classifieds and ads : +91 9742974234
error: Content is protected !!