Articles

ಆಸೆಯೇ ದು:ಖಕ್ಕೆ ಮೂಲ. ಸುಖಕ್ಕೆ ಮೂಲ ಕಾರಣ…?

ಚಂದ್ರಶೇಖರ ಡಿ. ವಕೀಲರು, ಮೈಸೂರು.

buddha_askmysuru

ಸುಖ ಮತ್ತು ದು:ಖ ಒಂದನ್ನೊಂದು ಒಟ್ಟಿಗೆ ಭೇಟಿಯಾದುದ್ದನ್ನು ಯಾರು ನೋಡಿರಲು ಸಾಧ್ಯವಿಲ್ಲ. ಆದರೆ ಸುಖವನ್ನ ಹರಸುತ್ತ ಹೊರಟವರು ಸುಖಕ್ಕೆ ಬದಲಾಗಿ ದು:ಖವನ್ನು ಹಾಗು ದು:ಖದಲ್ಲಿ ಇರುವವರು ದು:ಖದ ನಂತರ ಸುಖವನ್ನು ಭೇಟಿಯಾಗಿರಬಹುದು. ಆದರೆ ಸುಖ ಮತ್ತು ದು:ಖ ಒಟ್ಟಿಗೆ ಭೇಟಿಯಾಗಿರುವುದನ್ನು ನೋಡಿರಲು ಸಾಧ್ಯವೆ? ಯಾರಾದರೂ ಭೇಟಿ ಮಾಡಿರುವವರು ಇರಬಹುದೆ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ಸಿಗುವ ಉತ್ತರ ಪ್ರಶ್ನೆಯಾಗಿಯೇ ಉಳಿಯಬಹುದು.

sri krishnadevaraya hampi

ಬುದ್ಧ ಆಸೆಯೇ ದು:ಖಕ್ಕೆ ಮೂಲ ಕಾರಣ ಎಂದು ಹೇಳಿರುವುದು ಗೊತ್ತೇ ಇದೆ. ಆದರೆ ಸುಖಕ್ಕೆ ಮೂಲ ಕಾರಣ ಯಾವುದು? ಬುದ್ಧ ಬರೀ ಆಸೆ ಮತ್ತು ದು:ಖದ ಬಗ್ಗೆ ಹೇಳಿ, ಸುಖದ ಮೂಲ ಕಾರಣದ ಬಗ್ಗೆ ಹೇಳದೆ ಹೋದಾಗ ಸುಖವನ್ನ ಬಯಸುವ ನಮಗೆ ಬುದ್ಧ ಏಕೆ ಸುಖದ ಮೂಲ ಕಾರಣವನ್ನ ಒಂದು ವಾಕ್ಯದಲ್ಲಿ ಹೇಳಲಿಲ್ಲ? ಎಂಬ ಪ್ರಶ್ನೆ ಬಾರದೆ ಇರದು. ಈಗಲೂ ಕೆಲವರು, ಹೌದು ಸುಖಕ್ಕೆ ಮೂಲಕಾರಣ ಏನು? ಎಂದು ಯೋಚಿಸುತ್ತಿರಬಹುದು; ಕೆಲವರಿಗೆ ಉತ್ತರ ಸಿಕ್ಕಿದ್ದರೆ, ಇನ್ನೂ ಕೆಲವರಿಗೆ ಸಿಗದೆಯೂ ಇರಬಹುದು. ಆದರೂ ಸುಖಕ್ಕೆ ಮೂಲ ಕಾರಣ ಏನು?

ನಾವು ಯಾವಗಲೂ ನಮ್ಮ ಸುಖವನ್ನೇ ಬಯಸುತೇವೆ, ದು:ಖವನ್ನೂ ಅಪ್ಪಿತಪ್ಪಿಯೂ ಬಯಸುವುದಿಲ್ಲ. ಆದರೆ ಈ ಸುಖ ಮತ್ತು ದು:ಖ ಒಂದನ್ನೊಂದು ಸಂಧಿಸದೆ ಈ ಜೀವನ ಮುಗಿಯುವುದಿಲ್ಲ, ಎಂಬ ಸತ್ಯ ನಮಗೆ ಗೊತ್ತಿರದ ವಿಷಯವೇ ಅಲ್ಲ. ಆದರೂ ನಾವು ಸಂತೋಷವನ್ನೇ ಬಯಸೋಣ; ಅದರಲ್ಲಿ ತಪ್ಪಿಲ್ಲ. ಆದರೆ ಅದಕ್ಕಾಗಿ ನಾವು ದು:ಖವೇ ಬೇಡ ಅನ್ನೋಣ; ಅದೂ ತಪ್ಪಿಲ್ಲ, ಆದರೆ ಜೀವನದ ಆಟ ನಾವಂದುಕೊಂಡಂತೆ ನಡೆಯುವುದಿಲ್ಲ ಅದೂ ನಮಗೆ ಗೊತ್ತಿರದ ವಿಷಯವೇ ಅಲ್ಲ. ಆದರೂ ದು:ಖ ಮಾತ್ರ ನಮಗೇ ಬೇಡವೇ ಬೇಡ, ಏಕೆಂದರೆ ಅದನ್ನು ಅನುಭವಿಸಲು ಕಷ್ಟ, ಚೆನ್ನಾಗಿರುವುದಿಲ್ಲ. ನಮಗೆ ಚೆಂದವಿರುವುದಷ್ಟೆ ಬೇಕು ಅದೇ ಮುಖ್ಯ, ಅದನ್ನೂ ಒಪ್ಪೋಣ. ಆದರೆ ಈ ಚೆಂದವಿರುವ ಜೀವನ ಅಥವಾ ಸುಖ ಜೀವನ ಯಾವಾಗಲೂ ನಮ್ಮದಾಗಲು ಸಾಧ್ಯವಾ? ಸಾಧ್ಯವಾಗುವುದಾದರೆ ಅದು ಹೇಗೆ?

ನಮ್ಮ ಜೀವನ ಒಂದು ಗೊತ್ತು ಗುರಿಯಿಲ್ಲದೆ, ರೀತಿ-ನೀತಿಯಿಲ್ಲದೆ, ಸಾಗಲು ಬಿಟ್ಟಾಗ ನಮಗೆ ಜೀವನ ನಾವಂದುಕೊಂಡಂತೆ ನಡೆಯುತ್ತಿಲ್ಲವೆಂಬ ಸತ್ಯ ತಿಳಿದಾಗ, ದು:ಖ ಆವರಿಸುತ್ತದೆ. ತದನಂತರ ಸಮಾಧಾನವಿಲ್ಲದ ಜೀವನ ನಾವು ಬೇಡವೆಂದರೂ ಸಾಗುತ್ತಿರುತ್ತದೆ. ಇದೇ ಜೀವನವೆಂದು ನಾವು ಬದುಕಲು ಪ್ರಾರಂಭಿಸಿರುತ್ತೇವೆ. ಇಲ್ಲಿ ಒಂದು ವಿಷಯ ಗಮನಿಸಬೇಕು, ಜೀವನ ನಾವು ಹೇಗಿದ್ದರೂ ಅದರದ್ದೇ ಆದ ರೀತಿಯಲ್ಲಿ ಸಾಗುತ್ತಿರುತ್ತದೆ. ಅಂದರೆ ನಾವು ಸುಖದಲ್ಲಿದ್ದರೂ ಸೂರ್ಯ- ಚಂದ್ರರು ಬಂದು ಭೂಮಿಯನ್ನು ಬೆಳಗಿಸಿ ಹೋಗುತ್ತಾರೆ, ದು:ಖದಲ್ಲಿದ್ದರೂ ಸೂರ್ಯ- ಚಂದ್ರರು ಬಂದು ಭೂಮಿಯನ್ನ ಬೆಳಗಿಸಿ ಹೋಗುತ್ತಾರೆ. ಇದರರ್ಥ ದಿನದ ಬೆಳಗು ಮತ್ತು ರಾತ್ರಿ ಅದರದೇ ರೀತಿಯಲ್ಲಿ ಸಾಗುತ್ತಿರುತ್ತದೆ; ಅದರಲ್ಲಿ ಯಾವುದೇ ರೀತಿಯಾದ ಬದಲಾವಣೆಯಾಗುವುದಿಲ್ಲ. ಆದರೆ ಅದರಲ್ಲಿ ಇರುವ ನಾವು ಹೇಗೆ ಬದಲಾಗುತ್ತೇವೆ ಇದರಡಿಯಲ್ಲಿ ನಮ್ಮ ಸುಖ ಮತ್ತು ದು:ಖ ನಿರ್ಧಾರವಾಗುತ್ತದೆ. ಇದರಲ್ಲಿ ಬದಲಾಗ ಬೇಕಾದವರು ಯಾರು? ಸೂರ್ಯ ಚಂದ್ರರಲ್ಲ. ನಾವೇ.

ಕೆಲವರು ತಾವು ಏನನ್ನ ಮಾಡಬೇಕು ಮತ್ತು ಏನನ್ನ ಮಾಡಬಾರದು ಈ ವಿಷಯಗಳಲ್ಲಿ ಸರಿಯಾದ ತಿಳುವಳಿಕೆ ಇಲ್ಲದೆ ಸಮಸ್ಯೆಗಳಿಗೆ ಸಿಲುಕುತ್ತಾರೆ. ಮಾಡಬೇಕಾದ ಕೆಲಸಗಳನ್ನು ಮಾಡದೆ ಮುಂದೂಡಿದರೆ, ಮಾಡಬಾರದ ಕೆಲಸಗಳನ್ನ ಮಾಡಿ ಮುಗಿಸಿದರೆ ಅದರಿಂದ ತಮಗೆ ತೊಂದರೆಯಾದೀತು ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದೆ ಎಷ್ಟೋ ಜನ ತೊಂದರೆಗೆ ಸಿಲುಕುವುದೂ ಇದೆ. ಇದೂ ದು:ಖಕ್ಕೆ ಕಾರಣಗಳಲ್ಲಿ ಒಂದು. ಇಂದು ನಾವು ಮಾಡಬೇಕಾದ ಅಥವಾ ನಿರ್ವಹಿಸಬೇಕಾದ ಜವಾಬ್ದಾರಿಗಳಿಂದ ದೂರಹೋದರೆ ನಾಳಿನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಪ್ರತಿಯೊಬ್ಬರಿಗೂ ಅಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರದೇ ಆದ ಜವಾಬ್ದಾರಿಗಳಿರುತ್ತವೆ ಅವುಗಳನ್ನ ನಿರ್ವಹಿಸದೆ ಮುಂದೂಡಿದರೆ ಮುಂದೆ ದು:ಖವನ್ನು ಆಹ್ವಾನಿಸಿದಂತಾಗುವುದಿಲ್ಲವೇ?.

ನಾವು ನಮ್ಮ ಜೀವನದಲ್ಲಿ ಸುಖವಾಗಿರಬೇಕಾದರೆ ಮಾಡಲೇ ಬೇಕಾದ ಕೆಲಸಗಳ ಬಗ್ಗೆ ಗಮನಹರಿಸಿ ಮುಗಿಸಿದರೆ ಸುಖ ಅಲ್ಲೇ ಮನೆಮಾಡಿರುತ್ತದೆ. ಅಂದರೆ ಸುಖದ ಮೂಲಕಾರಣ ಇದಲ್ಲವೇ? ಆದರೆ ಆ ಮಾಡಲೇ ಬೇಕಾದ ಕೆಲಸಗಳನ್ನು ಮಾಡುವಾಗ ಕಷ್ಟವಿಲ್ಲವೆಂದಲ್ಲ. ಈ ಕಷ್ಟವನ್ನ ದಾಟದೆ ಸುಖವನ್ನ ಮುಟ್ಟಲಾಗುವುದಿಲ್ಲ. ಅಂದರೆ ಸುಖದ ದಾರಿಯನ್ನು ಸೇರಲು ಈ ಕಷ್ಟ ಎಂಬ ಪಯಣ ಬೇಕೆ ಬೇಕು ಎಂದಾಯಿತು. ಇದನ್ನ ಬಿಟ್ಟು ಬೇರೆ ಮಾರ್ಗದಲ್ಲಿ ಸುಖವನ್ನ ಭೇಟಿ ಮಾಡಲಾಗುವುದೆ? ಸಾಧ್ಯವಿಲ್ಲ. ಏಕೆಂದರೆ ಸುಖ ತನ್ನಷ್ಟಕ್ಕೆ ತಾನೇ ಬರುವುದಿಲ್ಲ ಅದಕ್ಕೆ ಅದರದೆಯಾದ ಬೆಲೆ ತೆತ್ತಾಗ ಮಾತ್ರ ಅದರ ಹುಟ್ಟು ಸಾಧ್ಯ, ಇಲ್ಲದಿದ್ದರೆ ಸಾಧ್ಯವಿಲ್ಲ.

ಮೊದಲೇ ಹೇಳಿದ ಹಾಗೆ ವಯಸ್ಸಿಗೆ ತಕ್ಕಂತೆ ವೃತ್ತಿಗೂ ಜವಬ್ದಾರಿಗಳಿರುತ್ತವೆ, ಇವುಗಳಿಂದ ನುಣುಚಿಕೊಳ್ಳದೆ ಹೋದರೆ ದು:ಖವೆಂಬ ಪದ ನಿಮ್ಮ ಜೀವನದಲ್ಲಿ ಮನೆಮಾಡುವುದಿಲ್ಲ. ನಾವು ಯಾವಾಗ ಜವಬ್ದಾರಿಗಳಿಂದ ನುಣುಚಿಕೊಳ್ಳುತ್ತೇವೆಯೋ ಅಲ್ಲಿ ದು:ಖ ಎಂಬ ಪದಕ್ಕೆ ಆಹ್ವಾನ ಕೊಡುತ್ತೇವೆ. ನಾವು ಜವಬ್ದಾರಿಗಳನ್ನ ನಿರ್ವಹಿಸಿದರೆ ಅಲ್ಲಿ ಸುಖ ಎಂಬ ಪದಕ್ಕೆ ಆಹ್ವಾನ ಕೊಟ್ಟಿರುತ್ತೇವೆ. ಹಾಗೆ ಈ ದು:ಖ ಮತ್ತು ಸುಖ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ ಒಂದರ ಹಿಂದೆ ಒಂದು ಇದ್ದೇ ಇರುತ್ತದೆ. ನೀವು ಯಾವುದನ್ನ ಆಹ್ವಾನಿಸುತ್ತೀರೋ ಅದು ಮಾತ್ರ ಕಾಣಸಿಗುತ್ತದೆ. ಆಹ್ವಾನಿಸುವವರು ಯಾರು ಸುಖ ಮತ್ತು ದು:ಖಗಳಲ್ಲ. ನಾವೇ. ಸುಖಕ್ಕೆ ಮೂಲ ಕಾರಣ ಈಗ ನಿಮಗೆ ಉತ್ತರ ಸಿಕ್ಕಿತೆ ? ಈ ಮೇಲೆ ತಿಳಿಸಿದಂತೆ ಒಂದೇ ನಾಣ್ಯದ ಎರಡು ಮುಖದಿಂದ ಒಂದು ಮುಖವನ್ನ ತೆಗೆಯಬಹುದು! ಅರ್ಥಾತ್ ಹೌದು ಇರುವುದರಲ್ಲಿ ತೃಪ್ತಿ ಹೊಂದುವುದನ್ನ ಕಲಿತರೆ ಅದು ಸುಖಕ್ಕೆ ಮೂಲ ಕಾರಣವಾಗಬಹುದು!

Contact us for classifieds and ads : +91 9742974234



 

Comments are closed.

error: Content is protected !!