Agriculture

ಹೈನುಗಾರನ ಮಾತುಗಳು….

Nagendra Sagar

ನಿಜ ಹೇಳ ಬೇಕೆಂದರೆ ನಾವು ಬದುಕು ಕಟ್ಟಿಕೊಂಡಿದ್ದೇ ಹೈನುಗಾರಿಕೆಯಿಂದ.. ಹಸುಗಳಿಗೂ ನನಗೂ ಬಾಲ್ಯಕಾಲದ ನಂಟೇ ಆದರೂ ಕೃಷಿಯೇ ಬದುಕು ಎಂಬ ಹೋರಾಟ ಪ್ರಾರಂಭಿಸಿದಾಗ ನಮ್ಮ ಮೊದಲ ಆಯ್ಕೆ ಹೈನುಗಾರಿಕೆಯೇ ಆಗಿತ್ತು.

sri krishnadevaraya hampi

ಹೈನುಗಾರಿಕೆ ಪ್ರಾರಂಭಿಸುವುದಕ್ಕೆ ಎರಡು ಮುಖ್ಯ ಕಾರಣ ಇದ್ದವು.. ಮೊದಲನೆಯದಾಗಿ ಹಸು ಕಟ್ಟಿದ ಮಾರನೇ ದಿನದಿಂದಲೇ ಇನ್ವೆಸ್ಟಮೆಂಟಿಗೆ ರಿಟರ್ನ್ಸ ಬರುತ್ತದೆ.. ಎರಡನೆಯದಾಗಿ ಮತ್ತು ಮುಖ್ಯವಾಗಿ ನನ್ನ ಎರೆಹುಳ ಗೊಬ್ಬರ ತಯಾರಿಕಾ ಘಟಕಕ್ಕೆ ಸಗಣಿಯ ಗೊಬ್ಬರ ಅವಶ್ಯಕತೆ ಇತ್ತು.. ಹೈನುಗಾರಿಕೆ ಆರಂಭಿಸುವುದರಿಂದ ಎರಡೂ ದೃಷ್ಟಿಯಿಂದ ಲಾಭ ಎಂದು ಕೈ ಹಚ್ಚಿದ್ದೇನೋ ಸರಿ. ಆದರೆ ಯೋಜನೆ ಗೆಲುವಿನ ಹಳಿಗೆ ಬರುವ ತನಕ ಪಟ್ಟ ಪರಿಪಾಟಲು ದೊಡ್ಡದೇ ಇತ್ತು.

ವರದಾಮೂಲದಲ್ಲಿ ಹಾಲು ಸೊಸೈಟಿ ಆರಂಭ ಆಗುವುದಕ್ಕಿಂತ ಮುನ್ನ ನಮ್ಮಲ್ಲಿ ಆಕಳಿಗಿಂತ ಎಮ್ಮೆಯೇ ಹೆಚ್ಚಿದ್ದವು.. ಆಗ ಹಸುವಿನ ಹಾಲಿಗಿಂತ ಎಮ್ಮೆಯ ಹಾಲನ್ನೇ ಜನ ಬಯಸುತ್ತಿದ್ದರು.. ಎಮ್ಮೆಗಳ ಚಾಳಿ ಬುದ್ಧಿ, ಹಾಲು ಹಿಂಡುವ ಲೆಕ್ಕದಲ್ಲಿ ಕಡಿಮೆ ದಿನಗಳು ನಮಗೆ ಕೊರತೆಯಾಗಿ ಕಂಡಿತ್ತು. ಹತ್ತಿರದಲ್ಲೇ ಹಾಲು ಸಂಘ ಆರಂಭವಾದ ಮೇಲೆ, ಮತ್ತು ಎಮ್ಮೆ ಹಾಲನ್ನು ಸಂಘಕ್ಕೆ ಹಾಕುವುದು ಲಾಭದಾಯಕ ಅಲ್ಲವಾದ್ದರಿಂದ ನಾವು ದನಗಳನ್ನಷ್ಟೇ ಉಳಿಸಿ ಕೊಂಡೆವು.

ಹಾಗೆ ನೋಡಿದರೆ ನಮ್ಮ ಮಲೆನಾಡಿನಲ್ಲಿ ಹೈನುಗಾರಿಕೆ ಲಾಭ ಏನೂ ಅಲ್ಲ.. ದನಗಳ ನಿರ್ವಹಣಾ ವೆಚ್ಚಕ್ಕೂ ಡೈರಿಯಿಂದ ಬರುವ ಉತ್ಪತ್ತಿಗೂ ಸರಿ ಹೋಗುತ್ತದೆ ಎನ್ನಬಹುದು.. ಐದು ಕರೆಯುವ ಹಸು ಇರಿಸಿಕೊಂಡು ಸರಾಸರಿ 45-50 ಲೀ. ಹಾಲು ಉತ್ಪಾದಿಸುವ ನಮಗೆ ಡೈರಿಯಲ್ಲಿ ಸರಾಸರಿ 30 ರೂ. ಸಿಗುತ್ತೆ.. ಉತ್ಪಾದಿಸುವ ಹಾಲಿನಲ್ಲಿ ಹದಿನೈದು ಲೀ. ಲೋಕಲ್ ಸೇಲ್ಸ ಇರುವುದರಿಂದ ಕೊಂಚ ಲಾಭ ಎಂದು ಕಾಣುತ್ತೇವೆ.

ಮನೆಗೆ ಹಾಲು ಹೈನು ಧಾರಾಳ ಸಿಕ್ಕಿದಂತೆ. ಇಲ್ಲವಾದರೆ ನಮ್ಮ ಹಾಲು ಬಳಕೆಯ ಹೊಡೆತಕ್ಕೆ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಬೇಕಾಗುತ್ತಿತ್ತು.. ಈಗ ನಮ್ಮಲ್ಲಿ ಹಾಲು ಕರೆವ ಐದು ಹಸುಗಳೂ ಸೇರಿದಂತೆ ಸಣ್ಣವೂ ದೊಡ್ಡವೂ ಸೇರಿ ಹನ್ನೆರಡು ರಾಸುಗಳು ಇವೆ. ಒಂದು ಕಾಲಕ್ಕೆ ಸಂಖ್ಯೆ ಇದಕ್ಕೂ ಹೆಚ್ಚೇ ಇತ್ತು.. ದಿನವೊಂದಕ್ಕೆ ಕನಿಷ್ಟ ನೂರು ಲೀ. ಹಾಲು ಹಾಕುವ ಗುರಿ ಇತ್ತು.. ಆದರೆ ಹೆಚ್ಚು ಹಸು ಕಟ್ಟುವುದು ಹೆಗ್ಗಳಿಕೆ ಆಗಬಹುದೇ ಹೊರತು ಲಾಭದಾಯಕ ಅಲ್ಲ ಎಂದು ಮನದಟ್ಟಾದ ಮೇಲೆ ಅಂತಹ ಭ್ರಮೆಗಳಿಂದ ಹೊರಬಂದೆ.

ಈಗ ಕೊಟ್ಟಿಗೆಗೆ ಮಿತಿ ಹಾಕಿಕೊಂಡ ಕಾರಣ ಕಾರ್ಮಿಕರ ಕೊರತೆ ಇದ್ದರೂ ನಾವೇ ನಿಭಾಯಿಸಬಹುದು.. ಮೇವು ಸುಧಾರಿಸಬಹುದು. ನಾವು ವರ್ಷಕ್ಕೆ ಕನಿಷ್ಟ ಎರಡು ರಾಸನ್ನು ಮಾರಾಟ ಮಾಡುತ್ತೇವೆ. ಇದು ನಮಗೆ ವರ್ಷವಿಡೀ ಕೊಟ್ಟಿಗೆ ನಿಭಾಯಿಸಿದ್ದಕ್ಕೆ ಸಿಕ್ಕ ಬೋನಸ್ಸು.

ಹೈನುಗಾರಿಕೆ ಮಾಡಲು ಬಹುಪಾಲು ಜನ ಹಿಂದೇಟು ಹೊಡೆಯಲು ಕಾರಣವೇನೆಂದರೆ ಹಾಲು ಮಾರಿದ ದುಡ್ಡಿನಿಂದ ಲಾಭ ಇರಲಿ ಕಾದ ಕೂಲಿ ಹುಟ್ಟುವುದಿಲ್ಲ.. ಸ್ವಲ್ಪ ಮಟ್ಟಿಗೆ ಈ ಮಾತು ನಿಜ. ಆದರೆ ನಿರ್ವಹಣಾ ವೆಚ್ಚದಲ್ಲಿ ಎಲ್ಲೆಲ್ಲಿ ಉಳಿತಾಯ ಮಾಡಬಹುದು ಎಂದು ಪರ್ಫೆಕ್ಟ ಲೆಕ್ಕಾಚಾರ ಹಾಕಬೇಕು.. ಮೊದ ಮೊದಲು ನನಗೆ ಒಣ ಮೇವು ಕೊಂಡು ಪೂರೈಸಲಿಕ್ಕೆ ಆಗುತ್ತಿರಲಿಲ್ಲ. ಸಣ್ಣ ಕಡ್ಡಿ ಹುಲ್ಲಾದರೆ ಈಡಾಗುತ್ತಿರಲಿಲ್ಲ. ದೊಡ್ಡ ಕಡ್ಡಿ ಹುಲ್ಲಾದರೆ ಅರೆ ಪಾಲು ಕಾಲಡಿಗೆ ಕೈಯಡಿಗೆ ಎಳೆದು ಹಾಳು.

ನಾವೀಗ ಒಣಹುಲ್ಲನ್ನು ತಾಸೆರಡು ಹೊತ್ತು ನೀರಲ್ಲಿ ನೆನೆಸಿ ಸೊಪ್ಪು ಕತ್ತರಿಸುವ ಯಂತ್ರದಲ್ಲಿ ಸಣ್ಣಗೆ ಕತ್ತರಿಸಿ ಹಾಕುವುದು.. ಅದಕ್ಕೆ ಹಸೀ ಮೇವನ್ನೂ ಬೆರೆಸುವುದರಿಂದ ಹುಲ್ಲು ವೇಸ್ಟಾಗದೇ ಖನಿಷ್ಟ ಶೇ.25ರಷ್ಟು ಖರ್ಚು ಉಳಿತಾಯವಾಗಿದೆ.. ರಾಸುಗಳೂ ಆರೋಗ್ಯದಿಂದಿವೆ.

ಇನ್ನು ವರ್ಷದಲ್ಲಿ ಏಳೆಂಟು ತಿಂಗಳು ಹಸಿ ಮೇವಿನ ವ್ಯವಸ್ಥೆ ಆಗಿದೆ.. ಹಸೀ ಹುಲ್ಲೇ ಅಂತಲ್ಲ, ಜಾನುವಾರು ತಿನ್ನುವ ಎಲ್ಲ ಬಗೆಯ ಸೊಪ್ಪು, ಬಾಳೆ ಎಲೆ, ದಿಂಡು, ಅಡಿಕೆ ಹಾಳೆ ಎಲ್ಲವನ್ನೂ ಯಂತ್ರದಲ್ಲಿ ಕೊಚ್ಚಿ ಹಾಕುತ್ತೇವೆ. ತಿಂದಷ್ಟು ತಿಂದವು. ಮಿಕ್ಕೂ ಉಳಿಯಿತೆಂದರೆ ಗೊಬ್ಬರದ ಬೆಡ್ಡಿಗೆ ಹೋಗುತ್ತದೆ.

ದಾನಿ ಮಿಶ್ರಣದ್ದೇ ಹೈನುಗಾರಿಕೆಯಲ್ಲಿ ದೊಡ್ಡ ಖರ್ಚು.. ನಾವು ಹತ್ತು ವರ್ಷಗಳಿಂದೀಚೆಗೆ ನಾವೇ ದಾನಿ ಮಿಶ್ರಣ ಮಾಡುತ್ತಿದ್ದೇವೆ. ಸಮತೋಲನ ಪಶು ಆಹಾರದ ಸೂತ್ರದಡಿಯಲ್ಲಿ ದಾನಿ ಮಿಶ್ರಣ ಸಿದ್ಧ ಪಡಿಸುತ್ತೇವೆ.. ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಅವುಗಳಿಗಿಕತ ಗುಣಮಟ್ಟದ ಹಿಂಡಿ ತಯಾರಿಸಲು ಸಾಧ್ಯವಾಗಿದೆ..‌ಈ ಒಂದು ಪ್ರಯೋಗದಿಂದ ಮೂರು ತರದ ಲಾಭ. ದಾನಿ ಖರ್ಚಿನಲ್ಲಿ ಉಳಿತಾಯ, ಹೆಚ್ಚಿನ ಹಾಲು ಮತ್ತು ದನಕರುಗಳ ಆರೋಗ್ಯದಲ್ಲಿ ಹೆಚ್ಚಿನ ಏರು ಪೇರಾಗದ ಕಾರಣ ವೈದ್ಯಕೀಯ ಖರ್ಚೂ ಕಡಿಮೆ.

ದಾನಿ ಮಿಶ್ರಣ ನನ್ನಲ್ಲಿ ಸಕ್ಸಸ್ ಆದ ಮೇಲೆ ಸುತ್ತಮುತ್ತಲಿನ ಹೈನುಗಾರರು ಪ್ರಭಾವಿತರಾಗಿ ಕೇಳಲಾರಂಭಿಸಿದ ಮೇಲೆ ದೊಡ್ಡ ಮಿಲ್ಲನ್ನು ಸ್ಥಾಪಿಸಿ, ಅದನ್ನೇ ಒಂದು ಪೂರಕ ಉದ್ದಿಮೆ ಮಾಡಿಕೊಂಡೆವು.. ವರ್ಷಕ್ಕೆ ಅಂದಾಜು ನಲವತ್ತು ಲಕ್ಷ ರೂ. ವಹಿವಾಟು ನಡೆಸುತ್ತೇವೆ.

ನಮ್ಮ ಊರೇನು ಮಲೆನಾಡಿನ ಬಹುತೇಕ ಹಳ್ಳಿಗಳಲ್ಲಿ ಹೈನುಗಾರಿಕೆಯನ್ನೇ ಬಿಟ್ಟಿದ್ದಾರೆ.. ಹಾಲು ಕೊಂಡು ತರೋದು. ಉರುವಲಿಗೆ ಸಿಲಿಂಡರ್ ಗ್ಯಾಸು ಬಳಸೋದು ಕಾಮನ್ ಫ್ಯಾಕ್ಟರ್.. ನಮ್ಮಲ್ಲಿ ಸಿಗುವ ಹತ್ತು, ಹನ್ನೆರಡು ಬುಟ್ಟಿ ಸಗಣಿಯನ್ನು ಗೋಬರ್ ಗ್ಯಾಸಿಗಾಗಿ ಕರಡುತ್ತೇವೆ.. 24 ತಾಸು ಉರಿಸಿದರೂ ಕಡಿಮೆ ಆಗದಷ್ಟು ನೈಸರ್ಗಿಕ ಗ್ಯಾಸು ಸಿಗುತ್ತೆ. ಹೀಗೆ ಪುಕ್ಕಟೆ ಸಿಗುವ ಗ್ಯಾಸಿನ ಧೈರ್ಯದಿಂದಲೇ ನಾವು ಜೊತೆ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುತ್ತೇವೆ.

ನಮ್ಮ ಕೊಟ್ಟಿಗೆಗೆ ಬಳಸಿದ ಹನಿ ನೀರೂ ವೇಸ್ಟಾಗದಂತೆ ಸಂಗ್ರಹಿಸಿ ರಸಾವರಿ ನೀರಾಗಿ ನನ್ನ ಕೃಷಿ ಜಮೀನಿಗೆ ಬಳಸುವುದರಿಂದ ತೋಟಕ್ಕೆ ನೀರಿನ ಜೊತೆಗೆ ದ್ರವ ರೂಪದ ಗೊಬ್ಬರವನ್ನೂ ಕೊಟ್ಟಂತೆ ಆಯಿತು.. ಈ ಮಾದರಿಯಿಂದಾಗಿ ನೀರಿನ ಸದ್ಬಳಕೆ ಆಯಿತು.. ಗೊಬ್ಬರದಲ್ಲೂ, ಆಳು ಸಂಬಳದಲ್ಲೂ ಉಳಿತಾಯ ಆದಂತಾಯಿತು.

ಈ ಮೊದಲು ನನ್ನ ಎರೆಗೊಬ್ಬರ‌ ಘಟಕಕ್ಕೆ ಮೂಲದ್ರವ್ಯವಾಗಿ ಸಗಣಿಯನ್ನು ಬಳಸುತ್ತೇವೆ ಎಂದಿದ್ದೆ. ನಮ್ಮಲ್ಲಿ ಸಿಗುವ ಕೃಷಿ ತ್ಯಾಜ್ಯ, ಕಾಡಿನ ದರುಕನ್ನೂ ಬಳಸಿ ಜೀವಾಣು ಗೊಬ್ಬರವನ್ನೂ ಸೇರಿಸಿ ಕಾಂಫೋಸ್ಟು ಮಾಡುತ್ತೇವೆ.. 60 ಟನ್ನು ಎರೆಗೊಬ್ಬರ ಆಗುತ್ತಿದೆ.. ಅದಕ್ಕೀಗ ಕುರಿಗೊಬ್ಬರ, ಬೇವಿನ ಹಿಂಡಿ ಮತ್ತಿತರ ಪೂರಕ ವಸ್ತುಗಳನ್ನು ಬಳಸಿ ಪರಿಪೂರ್ಣ ಸಾವಯವ ಗೊಬ್ಬರ ಆಗುತ್ತೆ. ವರ್ಷ ನೂರು ಟನ್ನು ಗೊಬ್ಬರ.. ಮನೆ ಬಾಗಿಲಲ್ಲೇ ಗ್ರಾಹಕರಿದ್ದಾರೆ.

ಹೀಗೆ ಹಾಲಿನ ಬಟ್ಟಲು ಹಿಡಿದು ಈ ಹಾಲು ನಮ್ಮ ಬದುಕಿನಲ್ಲಿ ಅಮೃತದಂತಾದ ವಿಷಯಗಳನ್ನು ಮೆಲುಕು ಹಾಕಿದೆ.. ಒಂದು ಕಾಲದಲ್ಲಿ ಹಸು ಸಾಕಣಿಕೆ ಹಳ್ಳಿಗಳಲ್ಲಿ ಮನೆ ಮನೆಯಲ್ಲಿತ್ತು.. ಅಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇರಲಿಲ್ಲ. ಅದು ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿತ್ತು.. ಹೈನುಗಾರಿಕೆ ನನಗೆ ಹೇಗೆ ಲಾಭದಾಯಕ ಆಯಿತು ಎಂದು ಲೆಕ್ಕಾಚಾರ ಹೇಳಿದ್ದೇನೆ. ಖಂಡಿತಾ ಅನುಸರಿಸಬಹುದು.

ಈ ಕೊರೋನಾ ದಾಂಗುಡಿಯಿಡುವ ಮೊದಲು ನನ್ನನ್ನೂ ಒಳಗೊಂಡಂತೆ ನಮ್ಮ ಹಾಲಿಗೆ ದೊರೆವ ದರ ಯಾವ ಲೆಕ್ಕಕ್ಕೂ ಸಾಲದು ಎಂದು ಗೊಣಗುಡುತ್ತಿದ್ದೆವು.. ಆ ಅಸಮಧಾನವೇನು ಈಗಲೂ ಇದೆ.. ಆದರೆ ಬೇರೆ ಬೆಳೆಗಾರರ ಪರಿಪಾಟಲು ನೋಡಿದರೆ ನಾವು ಹೈನುಗಾರರು ಸೇಫರ್ ಸೈಡಿನಲ್ಲಿ ಇದ್ದೇವೆ. ಸ್ವಲ್ಪ ಕಡಿಮೆ ದರವಿದ್ದೀತು, ಆದರೆ ಕೊಳ್ಳೋರು ಇಲ್ಲ ಅಂತ ತಲೆಯ ಮೇಲೆ ಕೈ ಹೊತ್ತು ಕೊಳ್ಳುವ ಸ್ಥಿತಿಯಲ್ಲಿ ಅಂತೂ ಇಲ್ಲ.

Contact us for classifieds and ads : +91 9742974234



 
error: Content is protected !!